Total Pageviews

Thursday, November 17, 2011

ಸ್ವಮೇಕ್ ದರ್ಬಾರ್

ಇತ್ತೀಚಿಗೆ ಬಿಡುಗಡೆಗೊಂಡ ಕನ್ನಡ ಸಿನಿಮಾಗಳಲ್ಲಿ ಗಾಂಧಿನಗರದ ಪಡ್ಡೇ ಹುಡುಗರ ಮನಸ್ಸನ್ನು ಗೆದ್ದಿದ್ದು ನಮ್ಮ ಕನ್ನಡದಲ್ಲೇ ತಯಾರಾದ ಕನ್ನಡ ಸ್ವಮೇಕ್ ಸಿನಿಮಾಗಳು. ಈಗ ಹೆಚ್ಚಿನ ಹಣ ಗಳಿಸಿ ನಿರ್ಮಾಪಕರ ಗಲ್ಲಾ ಪೆಟ್ಟಿಗೆ ತುಂಬುತ್ತಿರುವುದು ಸ್ವಮೇಕ್ ಸಿನಿಮಾಗಳಿಂದಲೇ. ಆದರೆ ರೀಮೇಕ್ ಚಿತ್ರಗಳು ಬಂದ ರಭಸದಲ್ಲೇ ಸದ್ದಿಲ್ಲದೇ ಹಿಂತಿರುಗಿದವು. ಜನ ಎಷ್ಟೋ ಕಾತುರದಿಂದ ಕಾಯುತ್ತಿದ್ದ ಸಿನಿಮಾಗಳೆಲ್ಲ ಸೈಲೆಂಟಾಗ್ ಸೈಡ್ ಗೆ ಹೊರಟವು. ಉದಾಹರಣೆಗೆ ಕನ್ನಡದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಪುನೀತ್ ರಾಜ್ ಕುಮಾರ ಅಭಿನಯದ ‘ಹುಡುಗರು’. ಹುಡುಗರು ನಿರ್ದೇಶಕ ಕೆ. ಮಾದೇಶ್, ನಿರ್ದೇಶಿಸಿರುವ ಮೂರೂ ಚಿತ್ರಗಳು ರೀಮೇಕ್ (ಗಜ, ರಾಮ್, ಹುಡುಗರು). ಹರಿಕೃಷ್ಣರ ಉತ್ತಮ ಸಂಗೀತವಿದ್ದಾಗಿಯೂ ಚಿತ್ರ ಜನರ ಮನ ಸೂರೆಗೊಳಿಸಲಿಲ್ಲ. ಹಾಗೆಯೇ, ಸುದೀಪ್ ಅಭಿನಯದ ಕೆಂಪೇಗೌಡ, ವಿಜಯ್ ಅಭಿನಯದ ವೀರ ಕಂಠೀರವ, ಕಿರಾತಕ, ದರ್ಶನ್ ಅಭಿನಯದ ಬಾಸ್, ಪ್ರಿನ್ಸ್ ಸಾಲು ಸಾಲಾಗಿ ಮನೆ ಸೇರಿಕೊಂಡವು, ಉಪೇಂದ್ರ ನಿರ್ದೇಶನದ ಸ್ವಮೇಕ್ ಚತ್ರ ಸೂಪರ್ ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದರೆ ರೀಮೇಕ್ ಆದ ‘ಶ್ರೀಮತಿ’ ಏನೂ ಮಾಡಲಿಲ್ಲ. ಮರ್ಯಾದೆ ರಾಮಣ್ಣ, ಪುತ್ರ, ಮನಸಿನ ಮಾತು, ಕಳ್ ಮಂಜ, ದಂಡಂ ದಶಗುಣಂ, ಡಬಲ್ ಡೆಕರ್, ಧೂಳ್, ಹೋರಿ, ಮಲ್ಲಿಕಾರ್ಜುನ, ಜಾಲಿಬಾಯ್, ಮಿ. ಡೂಪ್ಲಿಕೇಟ್, ಭದ್ರ, ಕಳ್ಳ ಮಳ್ಳ ಸುಳ್ಳ, ಹೀಗೆ ಪಟ್ಟಿ ಮಾಡಿರುವ 2011 ರಲ್ಲಿ ಬಿಡುಗಡೆಗೊಂಡ ಯಾವ ರೀಮೇಕ್ ಸಿನಮಾ ಕೂಡ ಶತ ದಿನೋತ್ಸವ ಆಚರಿಸಿಲ್ಲ. ಕನ್ನಡದಲ್ಲಿ ತಯಾರಾದ ಸ್ವಮೇಕ್ ಚಿತ್ರಗಳ ವಿಷಯಕ್ಕೆ ಬಂದರೆ, ಎಲ್ಲ ಚಿತ್ರಳೂ ಸದ್ದು ಮಾಡದೇ ಇದ್ದರೂ, ಸದ್ಯಕ್ಕೆ ಗಾಂಧೀನಗರದಲ್ಲಿ ಗಲಾಟೆ ಮಾಡುತ್ತಿರುವುದು ಮಾತ್ರ ಕನ್ನಡ ಸ್ವಮೇಕ್ ಚಿತ್ರಗಳು. ಪುನೀತ್ ಅಭಿನಯದ ಪರಮಾತ್ಮ, ದರ್ಶನ್ ಅಭಿನಯದ ಸಾರಥಿ ಕನ್ನಡ ಜನತೆಯ ಮನೆ ಮಾತಾಗಿದೆ. ನಿರ್ಮಾಪಕರಂತೂ ಬಂದ ವಾರದಲ್ಲೇ ಕೋಟಿ ಕೋಟಿ ಗಳಿಸಿ ಕನ್ನಡ ಚಿತ್ರರಂಗವನ್ನು ಉನ್ನತ ಸ್ಥಾನಕ್ಕೆ ಒಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ವರ್ಷದ ಮೊದಲ ಶತ ದಿನೋತ್ಸವದ ಚಿತ್ರ ಜಯತೀರ್ಥ ನಿರ್ದೇಶನದ ಚೊಚ್ಚಲ ಚಿತ್ರ “ಒಲವೇ ಮಂದಾರ”. ಈ ವರ್ಷದ ಹಿಟ್ ಸಿನಿಮಾಗಳ ಪಟ್ಟಿ ಮಾಡಿದರೆ ಎಲ್ಲವೂ ಸ್ವಮೇಕ್, ಸಂಜು ವೆಡ್ಸ್ ಗೀತಾ, ಸಾರಥಿ, ಪರಮಾತ್ಮ, ಲೈಫು ಇಷ್ಟೇನೆ, ಜಾನಿ ಮೇರಾ ನಾಮ್, ಒಲವೇ ಮಂದಾರ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ರಾಜಧಾನಿ, ಹೀಗೆ ಮುಂತಾದವು. ಪುಟ್ಟಕ್ಕನ ಹೈವೇ ಮತ್ತು ಬೆಟ್ಟದ ಜೀವ ಕಲಾತ್ಮಕ ಸಿನಿಮಾವಾಗಿಯೂ ಸ್ವಲ್ಪ ಮಟ್ಟಿಗೆ ಹೆಸರು ಮಾಡಿತು. ಇನ್ನಾದರೂ ಇದರಿಂದ ಪಾಠ ಕಲಿತು ಕನ್ನಡ ಚಿತ್ರ ನಿರ್ಮಾಪಕರು ಸ್ವಮೇಕ್ ಕಡೆಗೆ ಗಮನ ಕೊಡುತ್ತಾರೋ ಇಲ್ಲವೋ ಎಂದು ನೋಡಬೇಕು. ಇನ್ನು ‘ಐ ಆಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ’ ಸ್ವಮೇಕ್ ಚಿತ್ರದ ವಿಷಯಕ್ಕೆ ಬಂದರೆ ಅದರ ಕಥೆಯೇ ಬೇರೆ. ಅದನ್ನು ಮುಂದಿನ ಲೇಖನದಲ್ಲಿ ಹೇಳುತ್ತೇನೆ.

Monday, October 3, 2011

ಸಾರಥಿ - ಕಥೆ ಬರೀ ವಾಂತಿ

ಪಾತ್ರವರ್ಗ: ದರ್ಶನ್, ದೀಪಾ ಸನ್ನಿಧಿ, ರಂಗಾಯಣ ರಘು, ಶರತ್ ಲೋಹಿತಾಶ್ವ, ಮುಂತಾದವರು
ಸಂಗೀತ: ವಿ. ಹರಿಕೃಷ್ಣ
ನಿರ್ದೇಶನ: ದಿನಕರ್ ಎಸ್



ಒಂದು ಉತ್ತಮವಾದ ಹಳೆಯ ಕಥೆಯನ್ನು ಇಟ್ಟುಕೊಂಡು ಒಳ್ಳೆಯ ಚಿತ್ರಕಥೆ ಮಾಡುವಲ್ಲಿ ನಿರ್ದೇಶಕರು ಸೋತಿದ್ದಾರೆ. ಚಿತ್ರಕಥೆ ತುಂಬಾ ಉದ್ದವಾದ್ದರಿಂದ "ಸಾರಥಿ" ಚಿತ್ರವು ಎರಡೂಮುಕ್ಕಾಲು ಗಂಟೆ ಜನರನ್ನು ಹಿಡಿದಿಡುವಲ್ಲಿ ವಿಫಲವಾಗಿದೆ. ಅನವಶ್ಯಕ ಹಾಡುಗಳು, ದೃಶ್ಯಗಳಿಂದ ಬೋರಾಗುತ್ತದೆ. ದರ್ಶನ್ ಆಟೋ ಡ್ರೈವರ್ ಆಗಿರುವುದು ಕೇವಲ ಆಟೋ ಚಾಲಕರ ಸೆಂಟಿಮೆಂಟ್ ಗಾಗಿ ಅಷ್ಟೇ ಹೊರತು ಕಥೆಗೆ ಅದರ ಅವಶ್ಯಕತೆ ಇಲ್ಲ. ಪಾಳ್ಳೇಗಾರ ಅಳ್ವಿಕೆಯ ಹಳೇ ಕಥೆಗೆ ಗಣಿಯನ್ನು ಸೇರಿಸಿ ಕಥೆಯಲ್ಲಿ ಹೊಸತನವನ್ನು ತರಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಕಥೆ ತುಂಬಾ ಹಳೆಯದಾಗಿದ್ದು ಚಿತ್ರಕಥೆ ಅನವಶ್ಯಕವಾಗಿ ಉದ್ದವಾಗಿದೆ. ಕಥೆಯಲ್ಲಿ ಎಲ್ಲೋ ಒಂದು ಕಡೆ ತೆಲುಗಿನ ಮಗಧೀರ ಚಿತ್ರ ನೆನಪಾಗುತ್ತದೆ.

ಕೃಷ್ಣ ಕುಮಾರ್ ಛಾಯಾಗ್ರಹಣ ಉತ್ತಮವಾಗಿದೆ. ಹರಿಕೃಷ್ಣರ ಸಂಗೀತ ಹಾಡುಗಳು ಹಾಗೂ ಚಿತ್ರದುದ್ದಕ್ಕೂ ಅದ್ಭುತ. ಶರತ್ ಲೋಹಿತಾಶ್ವ ತಮ್ಮ ಪಾತ್ರಕ್ಕೆ ನ್ಯಾಯ ದೊರಕಿಸಿದ್ದಾರೆ. ಉಳಿದವರ ಅಭಿನಯ ಅಷ್ಟಕ್ಕಷ್ಟೇ. ದಿನಕರ್ ಅವರ ಹಿಂದಿನ ಎರಡು ಚಿತ್ರಗಳಿಗಿಂತ ಇದು ವಿಭಿನ್ನವಾಗಿದ್ದರೂ ಸಹ ಇದೊಂದು ಉತ್ತಮ ಚಿತ್ರವಾಗಿಲ್ಲ. ಚಿತ್ರಕಥೆ ಚಿಕ್ಕದಾಗಿದ್ದರೆ ಇದೊಂದು ಒಳ್ಳೆಯ ಸಿನಿಮಾ. ಸಾಹಸ ದೃಶ್ಯಗಳು ಕೇವಲ ದರ್ಶನ್ ಅಭಿಮಾನಿಗಳಿಗೆ ಮಾತ್ರ. ದಯವಿಟ್ಟು ಅದರಲ್ಲಿ ನೈಜತೆ ಹುಡುಕ ಹೋಗಬೇಡಿ. ದರ್ಶನ್ ಅಭಿನಯ ಎಂದಿನಂತೆಯೇ ಇದೆ.

ಒಟ್ಟಾರೆ, "ಸಾರಥಿ" ಚಿತ್ರ ದರ್ಶನ್ ಗಾಗಿ. "ಜೊತೆ ಜೊತೆಯಲಿ" ಹಾಗೂ "ನವಗ್ರಹ" ದಂತ ಅದ್ಭುತ ಸಿನಿಮಾ ನೀಡಿದ ದಿನಕರ್ ಗೆ ಅಲ್ಲ...

Wednesday, March 16, 2011

ಒಲವೇ ಮ೦ದಾರ...

ನಿರ್ದೇಶನ: ಜಯತೀರ್ಥ
ಪಾತ್ರವರ್ಗ: ಶ್ರೀಕಾ೦ತ್, ಆಕಾಂಕ್ಷ, ಮು೦ತಾದವರು...

ನಿಜವಾದ ಪ್ರೀತಿ ಎ೦ದರೇನು ಎನ್ನುವುದನ್ನು ಎಲ್ಲರ ಮನಸಲ್ಲೂ ಅಚ್ಚಿಳಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಒಬ್ಬ ಶ್ರೀಮ೦ತನ ಮಗನಾದ ನಾಯಕ (ಶ್ರೀಕಾಂತ್)ನಿಗೆ ನೃತ್ಯ ಬಿಟ್ಟು ಇನ್ನಾವುದರಲ್ಲೂ ಆಸಕ್ತಿ ಇರುವುದಿಲ್ಲ. ಒ೦ದು ನೃತ್ಯ ಸ್ಪರ್ಧೆಯಲ್ಲಿ ಒಬ್ಬ ನೃತ್ಯಗಾತಿಯನ್ನು ನೋಡಿ ಅವಳನ್ನು ಒಲಿಸಿಕೊಳ್ಳುತ್ತಾನೆ. ಅವನಿಗೆ ಅವಳ ಮೇಲೆ ಪ್ರೀತಿ ಹುಟ್ಟುವ ಸಮಯದಲ್ಲೇ ತಳ್ಳು ಗಾಡಿಯ ಮೇಲೆ ಹೆಂಡತಿಯನ್ನು ಕಾಶಿಗೆ ಕರೆದುಕೊ೦ಡು ಹೋಗುವವನನ್ನು ಕ೦ಡು ತಾನೂ ತನ್ನ ಪ್ರೇಯಸಿಯನ್ನು ಕಾಣಲು ಅಸ್ಸಾಂಗೆ ಓಡಲು ಪ್ರಾರಂಭಿಸುತ್ತಾನೆ. ಕಷ್ಟ ಪಟ್ಟು ಅಸ್ಸಾಂ ತಲುಪುತ್ತಾನೆ.

ಅಸ್ಸಾಂ ತಲುಪುವ ಮಧ್ಯದಾರಿಯಲ್ಲಿ ನಿಜ ಸ೦ಗತಿಯಾದ ದಶರಥ್ ಮಾ೦ಜೆ ಬೆಟ್ಟ ಒಡೆದ ಘಟನೆಯನ್ನು ನಿರ್ದೇಶಕರು ಸೇರಿಸಿದ್ದಾರೆ. ರವಿ ಕುಮಾರ್ ಅವರ ಛಾಯಾಗ್ರಹಣ ಅದ್ಭುತವಾಗಿದೆ. ದೇವ ಅವರ ಸಂಗೀತ ಕಿಕ್ಕೇರಿಸುವಂತಿಲ್ಲ. ಶ್ರೀಕಾ೦ತ್ ಅಭಿನಯ ಅಷ್ಟಕ್ಕಷ್ಟೇ. ರ೦ಗಾಯಣ ರಘು ಹಾಗೂ ದಶರಥ್ ಮಾ೦ಜೆ ಪಾತ್ರಧಾರಿ ಇಬ್ಬರ ನಟನೆ ಮೈ ಜುಮ್ಮೆನಿಸುವ೦ತಿದೆ. ಹೊಸ ನಿರ್ದೇಶಕ ಒ೦ದು ಉತ್ತಮ ಕಥೆಯನ್ನು ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರಕಥೆ ಉತ್ತಮವಾಗಿದೆ. ಪ್ರೇಕ್ಷಕರನ್ನು ಪೂರ್ತಿ ಸಿನಿಮಾ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ರ೦ಗಾಯಣ ರಘು ತನ್ನ ಹೆಂಡತಿಯನ್ನು ಗಾಡಿಯ ಮೇಲೆ ಕೂರಿಸಿಕೊಂಡು ತಳ್ಳಿಕೊಂಡು ಕಾಶಿಗೆ ಹೋಗುವುದು ಹಾಗೂ ಶ್ರೀಕಾ೦ತ್ ಅಸ್ಸಾಂಗೆ ಓಡಿ ಹೋಗುವದನ್ನು ಸ್ವಲ್ಪ ಅರಗಿಸಿಕೊಳ್ಳಬೇಕು. ಇನ್ನೆಲ್ಲವೂ ನೈಜತೆ ಹತ್ತಿರವಾಗಿದೆ.

ಹೊಸಬರ ಪ್ರಯತ್ನ ಯಶಸ್ವಿಯಾಗಿದೆ. ಎಲ್ಲರೂ ನೋಡಿ ಆನಂದಿಸಬಹುದಾದ ಕೌಟುಂಬಿಕ ಚಿತ್ರ.

Wednesday, January 5, 2011

ಮೈಲಾರಿ - ಚಿತ್ರ ವಿಮರ್ಶೆ


ಚಿತ್ರ: ಮೈಲಾರಿ
ತಾರಾಗಣ: ಶಿವ ರಾಜಕುಮಾರ್, ಸದಾ, ಮು೦ತಾದವರು
ನಿರ್ಮಾಣ: ಆರ್. ಎಸ್. ಪ್ರೊಡಕ್ಷನ್ಸ್
ನಿರ್ದೇಶನ: ಆರ್. ಚಂದ್ರು



ಹಳ್ಳಿಯ ಕಾಲೇಜಿನಲ್ಲಿ ಓದುತ್ತಿದ್ದ ಮೈಲಾರಿ (ಶಿವ ರಾಜಕುಮಾರ್) ತನ್ನ ತ೦ದೆಯೊ೦ದಿಗೆ ಜಗಳವಾಡಿಕೊ೦ಡು, ಜೀವನದಲ್ಲಿ ಸಾಧನೆ ಮಾಡುತ್ತೇನೆ ಎ೦ದು ಹಳ್ಳಿಯನ್ನು ಬಿಟ್ಟು ಬೆ೦ಗಳೂರಿಗೆ ಬರುತ್ತಾನೆ. ತನ್ನ ಸ್ನೇಹಿತ ಗುರುಪ್ರಸಾದ್ (ಗುರುಪ್ರಸಾದ್)ನನ್ನು ಹಿಡಿದು ತಾನು ಉಪ ಸ೦ಪಾದಕನಾಗಿದ್ದ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರುತ್ತಾನೆ. ಪ್ರತಿಷ್ಠಿತ ರಾಜಕಾರಣಿಯೊಬ್ಬನನ್ನು ಕೊ೦ದು ಗಲ್ಲು ಶಿಕ್ಷೆಗೆ ಗುರಿಯಾಗುತ್ತಾನೆ. ತಾನು ಏಕೆ ಹಳ್ಳಿ ಬಿಡುತ್ತಾನೆ ? ಕೊಲೆಗಾರನಾಗುತ್ತಾನೆ ? ಚಿತ್ರ ನೋಡಿ.

ಶಿವಣ್ಣನ ಅಭಿನಯದಲ್ಲಿ ಹೆಚ್ಚಿನ ವಿಶೇಷತೆ ಇಲ್ಲ. ಸದಾರವರು ಇರುವ ಕಡಿಮೆ ಭಾಗವನ್ನೇ ಸಮರ್ಪಕವಾಗಿ ನಿರ್ವಹಿಸಿದ್ದಾರೆ. ರ೦ಗಾಯಣ ರಘು ಹಾಗೂ ಸ೦ಜನಾರವರ ಪಾತ್ರಗಳ ಅವಶ್ಯಕತೆ ಚಿತ್ರದಲ್ಲಿರಲಿಲ್ಲ. ಆದರೂ ರ೦ಗಾಯಣ ರಘು ತಮ್ಮ ಉತ್ತಮ ಅಭಿನಯ ನೀಡಿದ್ದಾರೆ. ನಿರ್ದೇಶಕರು ಉತ್ತಮ ನಟನನ್ನು ಸಮರ್ಪಕವಾಗಿ ಉಪಯೋಗಿಸಿಕೊ೦ಡಿಲ್ಲ. ಚಿತ್ರದ ಪೂರ್ವಾರ್ಧದಲ್ಲಿ ನಿಧಾನಗತಿಯ ಚಿತ್ರಕಥೆಯಿದೆ. ಚಿತ್ರದಲ್ಲಿ ಹಾಡುಗಳನ್ನು ಚಿತ್ರಕಥೆ ಬೇಡಿರಲಿಲ್ಲ.


ಗುರುಕಿರಣ್ ತಮ್ಮ ಉತ್ತಮವಾದ ಸ೦ಗೀತ ನೀಡಿದ್ದಾರೆ. ಚಿತ್ರದ ಒ೦ದು ಹಾಡಿಗೆ (ಕೆಟ್ಟೋದ್ರಪ್ಪೋ ಪ್ಯಾಟಿ ಹುಡ್ಗೀರು) ಕಂಠ ಮತ್ತು ಸಾಹಿತ್ಯ ಸಹ ಸೇರಿಸಿದ್ದಾರೆ. ಆದರು ಚಿತ್ರದಲ್ಲಿ ಹಾಡುಗಳ ಅವಶ್ಯಕತೆಯಿರಲಿಲ್ಲ. ನಿಧಾನಗತಿಯ ಚಿತ್ರಕಥೆ ಪ್ರೇಕ್ಷಕರನ್ನು ಬಿಗಿದಿಡುವಲ್ಲಿ ಸೋತಿದೆ. ಹಾಗೂ ಅನವಶ್ಯಕ ಪಾತ್ರಗಳು ಮತ್ತು ಹಾಡುಗಳು ಸಹ.



Rating: