Total Pageviews

Thursday, November 17, 2011

ಸ್ವಮೇಕ್ ದರ್ಬಾರ್

ಇತ್ತೀಚಿಗೆ ಬಿಡುಗಡೆಗೊಂಡ ಕನ್ನಡ ಸಿನಿಮಾಗಳಲ್ಲಿ ಗಾಂಧಿನಗರದ ಪಡ್ಡೇ ಹುಡುಗರ ಮನಸ್ಸನ್ನು ಗೆದ್ದಿದ್ದು ನಮ್ಮ ಕನ್ನಡದಲ್ಲೇ ತಯಾರಾದ ಕನ್ನಡ ಸ್ವಮೇಕ್ ಸಿನಿಮಾಗಳು. ಈಗ ಹೆಚ್ಚಿನ ಹಣ ಗಳಿಸಿ ನಿರ್ಮಾಪಕರ ಗಲ್ಲಾ ಪೆಟ್ಟಿಗೆ ತುಂಬುತ್ತಿರುವುದು ಸ್ವಮೇಕ್ ಸಿನಿಮಾಗಳಿಂದಲೇ. ಆದರೆ ರೀಮೇಕ್ ಚಿತ್ರಗಳು ಬಂದ ರಭಸದಲ್ಲೇ ಸದ್ದಿಲ್ಲದೇ ಹಿಂತಿರುಗಿದವು. ಜನ ಎಷ್ಟೋ ಕಾತುರದಿಂದ ಕಾಯುತ್ತಿದ್ದ ಸಿನಿಮಾಗಳೆಲ್ಲ ಸೈಲೆಂಟಾಗ್ ಸೈಡ್ ಗೆ ಹೊರಟವು. ಉದಾಹರಣೆಗೆ ಕನ್ನಡದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಪುನೀತ್ ರಾಜ್ ಕುಮಾರ ಅಭಿನಯದ ‘ಹುಡುಗರು’. ಹುಡುಗರು ನಿರ್ದೇಶಕ ಕೆ. ಮಾದೇಶ್, ನಿರ್ದೇಶಿಸಿರುವ ಮೂರೂ ಚಿತ್ರಗಳು ರೀಮೇಕ್ (ಗಜ, ರಾಮ್, ಹುಡುಗರು). ಹರಿಕೃಷ್ಣರ ಉತ್ತಮ ಸಂಗೀತವಿದ್ದಾಗಿಯೂ ಚಿತ್ರ ಜನರ ಮನ ಸೂರೆಗೊಳಿಸಲಿಲ್ಲ. ಹಾಗೆಯೇ, ಸುದೀಪ್ ಅಭಿನಯದ ಕೆಂಪೇಗೌಡ, ವಿಜಯ್ ಅಭಿನಯದ ವೀರ ಕಂಠೀರವ, ಕಿರಾತಕ, ದರ್ಶನ್ ಅಭಿನಯದ ಬಾಸ್, ಪ್ರಿನ್ಸ್ ಸಾಲು ಸಾಲಾಗಿ ಮನೆ ಸೇರಿಕೊಂಡವು, ಉಪೇಂದ್ರ ನಿರ್ದೇಶನದ ಸ್ವಮೇಕ್ ಚತ್ರ ಸೂಪರ್ ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದರೆ ರೀಮೇಕ್ ಆದ ‘ಶ್ರೀಮತಿ’ ಏನೂ ಮಾಡಲಿಲ್ಲ. ಮರ್ಯಾದೆ ರಾಮಣ್ಣ, ಪುತ್ರ, ಮನಸಿನ ಮಾತು, ಕಳ್ ಮಂಜ, ದಂಡಂ ದಶಗುಣಂ, ಡಬಲ್ ಡೆಕರ್, ಧೂಳ್, ಹೋರಿ, ಮಲ್ಲಿಕಾರ್ಜುನ, ಜಾಲಿಬಾಯ್, ಮಿ. ಡೂಪ್ಲಿಕೇಟ್, ಭದ್ರ, ಕಳ್ಳ ಮಳ್ಳ ಸುಳ್ಳ, ಹೀಗೆ ಪಟ್ಟಿ ಮಾಡಿರುವ 2011 ರಲ್ಲಿ ಬಿಡುಗಡೆಗೊಂಡ ಯಾವ ರೀಮೇಕ್ ಸಿನಮಾ ಕೂಡ ಶತ ದಿನೋತ್ಸವ ಆಚರಿಸಿಲ್ಲ. ಕನ್ನಡದಲ್ಲಿ ತಯಾರಾದ ಸ್ವಮೇಕ್ ಚಿತ್ರಗಳ ವಿಷಯಕ್ಕೆ ಬಂದರೆ, ಎಲ್ಲ ಚಿತ್ರಳೂ ಸದ್ದು ಮಾಡದೇ ಇದ್ದರೂ, ಸದ್ಯಕ್ಕೆ ಗಾಂಧೀನಗರದಲ್ಲಿ ಗಲಾಟೆ ಮಾಡುತ್ತಿರುವುದು ಮಾತ್ರ ಕನ್ನಡ ಸ್ವಮೇಕ್ ಚಿತ್ರಗಳು. ಪುನೀತ್ ಅಭಿನಯದ ಪರಮಾತ್ಮ, ದರ್ಶನ್ ಅಭಿನಯದ ಸಾರಥಿ ಕನ್ನಡ ಜನತೆಯ ಮನೆ ಮಾತಾಗಿದೆ. ನಿರ್ಮಾಪಕರಂತೂ ಬಂದ ವಾರದಲ್ಲೇ ಕೋಟಿ ಕೋಟಿ ಗಳಿಸಿ ಕನ್ನಡ ಚಿತ್ರರಂಗವನ್ನು ಉನ್ನತ ಸ್ಥಾನಕ್ಕೆ ಒಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ವರ್ಷದ ಮೊದಲ ಶತ ದಿನೋತ್ಸವದ ಚಿತ್ರ ಜಯತೀರ್ಥ ನಿರ್ದೇಶನದ ಚೊಚ್ಚಲ ಚಿತ್ರ “ಒಲವೇ ಮಂದಾರ”. ಈ ವರ್ಷದ ಹಿಟ್ ಸಿನಿಮಾಗಳ ಪಟ್ಟಿ ಮಾಡಿದರೆ ಎಲ್ಲವೂ ಸ್ವಮೇಕ್, ಸಂಜು ವೆಡ್ಸ್ ಗೀತಾ, ಸಾರಥಿ, ಪರಮಾತ್ಮ, ಲೈಫು ಇಷ್ಟೇನೆ, ಜಾನಿ ಮೇರಾ ನಾಮ್, ಒಲವೇ ಮಂದಾರ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ರಾಜಧಾನಿ, ಹೀಗೆ ಮುಂತಾದವು. ಪುಟ್ಟಕ್ಕನ ಹೈವೇ ಮತ್ತು ಬೆಟ್ಟದ ಜೀವ ಕಲಾತ್ಮಕ ಸಿನಿಮಾವಾಗಿಯೂ ಸ್ವಲ್ಪ ಮಟ್ಟಿಗೆ ಹೆಸರು ಮಾಡಿತು. ಇನ್ನಾದರೂ ಇದರಿಂದ ಪಾಠ ಕಲಿತು ಕನ್ನಡ ಚಿತ್ರ ನಿರ್ಮಾಪಕರು ಸ್ವಮೇಕ್ ಕಡೆಗೆ ಗಮನ ಕೊಡುತ್ತಾರೋ ಇಲ್ಲವೋ ಎಂದು ನೋಡಬೇಕು. ಇನ್ನು ‘ಐ ಆಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ’ ಸ್ವಮೇಕ್ ಚಿತ್ರದ ವಿಷಯಕ್ಕೆ ಬಂದರೆ ಅದರ ಕಥೆಯೇ ಬೇರೆ. ಅದನ್ನು ಮುಂದಿನ ಲೇಖನದಲ್ಲಿ ಹೇಳುತ್ತೇನೆ.